ನನ್ನವಳು ನನ್ನವಳು ನನ್ನವಳು ಬಣ್ಣಿಸಲು ಬಿಡಿಸಿಹೇಳಲು ನುಡಿಗಳಿಗೆ ನಿಲುಕದವಳು ನಿಂತು ನೋಡಿತು ಹಂಸೆ ಕೊಳದೊಳಗೆ, ಕಳೆದಮನದಿ ನಡೆಯುತಿರಲು ನನ್ನವಳು, ಕುರುಡನ ಒಳಕಂಗಳನೂ ಸೆಳೆವ ತೆರದಿ ಬೆಚ್ಚಿತು ಮೂಗಮುಚ್ಚಿ ಸಿಡಿಶೀನಿಗೆ ಹೆದರಿ ಕೆಂಡಸಂಪಿಗೆಯು, ಅಲ್ಲಿ ಸವಿಚೆಂಗಂಪನು ಬೀರುತಡರಿಸುತ ನನ್ನವಳು ನಲಿದುಬರುವಲ್ಲಿ ನಾಚಿತು ಅರೆಗಣ್ಣುಮುಚ್ಚಿ ಕೆಂಗುಲಾಬಿಯ, ದಳಜೊಂಪು ಕಂಡು ತೆರೆದುಳಿದ ಬೆರಗುಗಂಗಳಿಂದ ನನ್ನವಳ ಕೆನ್ನೆಗೆಂಪು ಹೆದರಿತು ಕೊಳಲು ಕುಳಿಯೊಳೂದಿದ ಸೂಲಿಗೆ, ಸ್ವರವತರಲು ಕೇಳಿ ತಣಿದು ನನ್ನವಳು ತನಗಿಂತ ಮೆಲ್ಲಿನಿದಾಗಿ ನುಡಿಯುತಿರಲು ತಲ್ಲಣದಿ ಓಡಿತು ನೇಸರ ಬಚ್ಚಿಟ್ಟುಕೊಳ್ಳಲು, ಮಲೆತಾಯ ಮನೆಯೊಳಗೆ ನನ್ನವಳ ಮೈಕಾಂತಿ ಮರೆಮಾಚಲು ಅದರ ಬೆಳಕಿನಸೊಬಗ ಹಿರಿಮೆಯಬಗೆ ಬುಸುಗುಟ್ಟಿ ಮೊರೆದುಕ್ಕಿ ಹರಿದು ಚೆಲ್ಲಿಹೋಯಿತು, ಹಾಲು ಒಳಗಿಚ್ಚಿನಿಂದ ಕಂಡುಕುದಿದು ತನಗಿಂತ ತಿಳಿಯಾದ ನನ್ನವಳ ನಡತೆಯ ಹೆಚ್ಚುಪಾಲು ಹಿಗ್ಗಿತು ಮನವು ಮಾತುಗಳಿಲ್ಲದೆ ಕವಿಬಹುಳದ ಬಾಯಿ, ಮೂಕವಾಯಿತೆಂದೆ! ಅರಿತು ಬಿಮ್ಮನೆ! ನುಡಿಗಳ ಕಿರಿಮೆ ನನ್ನವಳ ಅಂದದ ಮುಂದೆ - ಗುರುಶಾಂತೇಯ