Posts

ಹೆಂಡತಿ

ತಾಳ್ಮೆಯನೊಲಿದವಳು, ತಾವರೆಯಮೊಗದವಳು, ತಾರೆಬೆಳುಹೊಳಪವಳು, ತಾಯಿಯ ತರದವಳು, ತಾಯ್ತನ ತಳೆದವಳು, ಬಾಳಬಾನ ಬೆಳದಿಂಗಳಿವಳು, ಬಾಳಫಲದ ತಿರುಳಸವಿಯಿವಳು, ಬಾಳಬನದ ಸಿರಿಬಿಲ್ವವಿವಳು, ಬಾಳನಡೆಯ ನಿಡುಸೂಲಿವಳು, ಬಾಳಿಗೆ ಬಿಂಕದರಿಕೆಯಿವಳು, ತರಳದರಿಮೆಯವಳು, ತರದ ಹಿರಿಮೆಯವಳು, ಬದುಕಿನ ಬಿಗುಮಾನಳು, ಬದಲಿಗೆ ಸಿಗದವಳು, ಪ್ರಭುವಿಗೆ ಹಿರಿಮಗಳು, ಹರನ ವರವಿವಳು, ಹರಸಿ ಮಲೆಮಗಳು, ನನಗೆ ಬಿಗಿದವಳು, ಇವಳು ಒಡನಿಹಳು!, ಇಹುಗೆ ನಲಿಮುಗುಳು. -ಗುರುಶಾಂತೇಯ

ಕಲಿತು ಕಲಿಸಿದ ಮಗಳು

ನಗುವ ಕೇಳುತ ನಗುವ ನಿನ್ನ ನಗುವಿನ ಕೇಕೆಯಲ್ಲಿ ನಗುತ ನಗಿಸುವುದ ಕಲಿತೆ ಉಣವ ಬೇಡದೆ ಉಣುವ ನೀನು ನೊಣೆದುಣುವಲ್ಲಿ ನೀಡಿ ಉಣಿಸುವುದ ಕಲಿತೆ ಸೋತು ಸೋಲದೆ ಹಿಡಿವ ನಿನ್ನ ಹಠದ ಹಿಡಿವಾದದಲ್ಲಿ ಅರಿತು ಬಾಗುವುದ ಕಲಿತೆ ಅಳುವೆ ಬಾರದೆ ಅಳುವ ನಿನ್ನಳುವ ಹುಸಿನೋವಿನಲ್ಲಿ ಮನವ ಸೋಲುವುದ ಕಲಿತೆ ನಡೆಯ ಅರಿಯದೆ ಇಡುವ ನಿನ್ನಡಿಯ ತಣ್ಣೆರಳಿನಲ್ಲಿ ನಿನ್ನ ಕೈಹಿಡಿದು ನಡೆಸುವುದ ಕಲಿತೆ ಜೊಲ್ಲು ಸುರಿಸುತ ಸೂಸುವ ನಿನ್ನ ತೊದಲುಗಳಲ್ಲಿ ನುಡಿಯ ಮೂಲವನಾರಾಯ್ವುದ ಕಲಿತೆ ಪರಿಜು ತಿಳಿಯದ ಗೀಚುವ ನಿನ್ನ ಗೋಜಲುಗಳಲ್ಲಿ ಬರೆಹ ಬೆಳೆದುಬಂದ ನಡೆಯ ಕಲಿತೆ ಕಲಿತು ಕಲಿಸುವ ಕಲೆಯ ಕಲರವ ನೀನು, ಕಲಿಕೆಯೊಡತಿ ನೆಚ್ಚಿನ ನಿಜಹರನೊಡತಿಯೆಂದು ಕಲಿತೆ ಗುರುವು ನೀನೆಲೆ ಮಗುವೆ ನಿನ್ನ ರೂಪ ತಂದವನಿಲ್ಲಿ ತಂದೆ ನಾನೆಂತು ಎನುವುದ ಕಲಿತೆ ನಿಜಕು ಕಾರಣ ಮಗಳೆ ನಿನ್ನ ಬಗೆಗಳಾಧಾರವಿಲ್ಲಿ ಬಹುವ್ರೀಹಿ 'ಆತ್ಮಜ'ದ ನಿಜಭಾವವ ಕಲಿತೆ -ಗುರುಶಾಂತೇಯ

ತಂದೆ

ಕೇಳುಕೇಳಿದದೆಲ್ಲವ ಕೊಡಲಾಗದಿದ್ದಿರಬಹುದು, ಬೇಕಾದುದನ್ನು ಮಾತ್ರವೇ ಕೇಳಿ ಗೋಳಿಲ್ಲದೆ ಗಳಿಸುವ ಮನಸ್ಸಿನ ಸಂಸ್ಕೃತಿಯ ಮೂಲ ನೀವು. ಹೇಳಿಕೇಳಿದುದೆಲ್ಲವ ಆಡಂಭರಿಸದಿದ್ದಿರಬಹುದು, ವಿರಳವಾದ ಸರಳದ ಬದುಕನ್ನೇ ಜಂಭರಿಸದೆ ಡಂಭರಿಸುವ ಅಭಿಮಾನಿತನದ ಮೂಲ ನೀವು. ತೇಗಿತೂಗೆಸೆವಷ್ಟು ತಿನಿಸುಣಿಸಿಲ್ಲದಿದ್ದಿರಬಹುದು, ತುತ್ತನು ತೂಗದೆಲೆಯೆ ತೂಕವನರಿವ ತಿಳಿಮೆಯ ಸಾಧನೆಯ ಸುಳಿವಿನ ಸೆಲೆಯ ಮೂಲ ನೀವು. ಸಾಕುಸಾಕೆನಿಸುವಷ್ಟು ವಿದ್ಯೆಯಿಲ್ಲದಿದ್ದಿರಬಹುದು, ಅದಾವುದಾದರೇನು? ನುರಿತವನಿಗಿರುವ ಹಿರಿಮೆಯ ಗರಿಮೆ ತೋರಿಸಿದ ತೋಚಿನ ಮೂಲ ನೀವು ಪೆದ್ದಮುದ್ದನೀವ ತಾಯ್ಮನಸು ನಿಮ್ಮದಲ್ಲದಿದ್ದಿರಬಹುದು, ಗುದ್ದುಸದ್ದುಗಳಿಲ್ಲದೆ ತಿಳಿವಿನ ಮೊದ್ದುನಿದಿರೆಯ ತೊಡೆದು ಎದ್ದೇಳಿಸಿದ ಬುದ್ಧಿಹಿಂದಿನ ಅರಿವಿನ ಮೂಲ ನೀವು ಧರಿಸಿದಾರ್ಢ್ಯದಿ ಧರ್ಮವ ಆಚರಿಸದಿದ್ದಿರಬಹುದು ನುಡಿಯ ಹಂಗಿಲ್ಲದೆ ನಡೆದೆ ತೋರಿಸಿದ ಶಿವತತ್ತ್ವದಾಧಾರಿ ಕಾಯಕದ ಸಿದ್ಧಿಯ ಗುರುತರ ಮೂಲ ನೀವು -ಗುರುಶಾಂತೇಯ

ತತ್ತ್ವಮಸಿ

ತೂತುಮುಚ್ಚಿದ ತೇಪೆದೋಣಿಯೊಂದ ತೇಲಿಸಿ ತೂಕತೂಗಿದ ಶೋಧಕಬಾಳೊಂದ ಕೂರಿಸಿ ನಲವ ಬಗೆಯ ಹರಸುವ ಸುಖದ ನಗೆಯ ಅರಸುವ ಕಾತುರಾತುರ ತರದಲೆ  ಸೂತಕಪಾತಕ ಗೆಯ್ಸಲೆ ನಗುವು ಹೇರಿದ ತೂಕವು ತೇಪೆಸಮೆಸಲು ಮುಳುಗಿಸಿ ಅಳುವು ಹೀರಿದ ತೂಕವು ಹಗುರಗೊಳಿಸಲು ಏಳಿಸಿ ಗಂತವ್ಯವೆಂಬ ಭ್ರಮೆಯ ಹೊರಿಸಿ ಕರ್ತವ್ಯವೆಂಬ ಶ್ರಮವ ತೆರಿಸಿ ಪಡೆವುದೇನದೇನನೆಂದು ಕೇಳುತಿಹಳು ಮಾಯಾಯಿ ನಿನ್ನರಸಿ ತೊಡೆಯಮೇಲೇರಿಸಿಂದು ತಿಳಿಯಹೇಳು ಮಾರಾರಿ, ತತ್ತ್ವಮಸಿ.

Privacy policy for Android apps

This is to ascertain the users of the following Android applications from Google Play-store - Vachana Kammata & D V G Kagga Sarvajna Tripadi That, none of the above two applications require any sort of forced or hidden permissions - the same can be ascertained from the source code links provided below - Both these projects are open sourced under GitHub. These application were designed and deployed for the purpose to serve the public with the awesome   Vachana Kammata - Vachana literature which is huge corpus of collection of sayings from multiple vachanakaaras of last millennium - They start back from 11th century and are still continuing to propagate the tradition. - Source code hosted under - https://github.com/NarendraPrabhu/Vachanas D V G Kagga - Mankutimmana and Marulamuniyana Kagga - Sayings of one of the greatest Kannada litterateurs of 20th century - D V Gundappa. - Source code hosted under https://github.com/NarendraPrabhu/Kagga Sarvajna Tripadi - ...

ಬಾಯ್ಚಪಲ

ಹುಳಿಯುಂಟು ಸಿಹಿಯುಂಟು ಖಾರದೊಗರುಂಟು ನೀರೂರುವ ಬಾಯಿಚಪಲದ ಜೊಲ್ಲಿನಂಟುಂಟು ಕುರುಮಿಸುವೀ ತಿಂಡಿಯ ತಿನಲು ಬರುವವರುಂಟು ಬಂದವರು ಲೊಟ್ಟೆಯಿಡಿಸುವೀ ತಿನಿಸ ಬೇಡಿದುದುಂಟು ಬೇಡುವಭರದಿ ಬೇಡದಾಚಾರದಾಚಾರಿಗಳಾದದ್ದುಂಟು ಅಣ್ಣ-ಬಯ್ಯ-ನಾದುದುಂಟು ಹುಳಿನೀರು-ಪಾನಿ-ಯಾದಂತುಂಟು ಕೊಡಿ-ದೋ-ಆದದ್ದುಂಟು ಸುರಮಿಸಿತು ಬಾಯ್ಸವಿಯ ತಿಂಟು ತಿನ್ನುವ ಆ ಹೊತ್ತು, ವಿರಮಿಸಿತು ತಾಯ್ನುಡಿಯ ನಂಟು ಮರೆಸುವ ಕೆಡುಹೊತ್ತು ಹೊರಗಿಂದಾಗಮಿಸಿ ನಾಲಗೆಯ ಮೇಲಾಡಿ ಒಳಹೊಕ್ಕು ಕಸವಾಗಿ ಭವಿ ಜರಜಜಾರನನ್ನಾಗಿಸುವ ಸವಿಯೊಂದು ಒಳಗಿನಿಂದುದಿಸಿ ನಾಲಗೆಯ ಮೇಲಾಡಿ ಹೊರಪೊಕ್ಕು ರಸವಾಗಿ ಕವಿ ಅಜರಾಮರನನ್ನಾಗಿಸುವ ಸವಿಯೊಂದು ಹೊಟ್ಟೆಹೊರೆಯಲು ಬಂದವನ ಮಾಯ್ನುಡಿಯ ಭಂಡಜೋರಿನ ಮುಂದೆ ಹೊಟ್ಟೆಹೊರೆಸಲು ಬಂದವನ ತಾಯ್ನುಡಿಯು ಮಂಡಿಯೂರಿತು ಅಂದೆ 'ಚೆನ್ನಾ'ಗಿ 'ತೂರ್'ಇ 'ದಾಲ್'ಆಗಿಸಿ ಬೇಳೆಬೇಯಿಸಿಕೊಂಡರು ಮೆಣಸ ಮಿರ್ಚಾಗಿಸಿ ಅಡಿಯಲ್ಲಿ ಉರಿಯಿಟ್ಟರು, ಬಂದವರು ಸಾರು ರಸವಿಲ್ಲದ ರಸವಾಗಿ ನಿಸ್ಸಾರವಾಯಿತು ಕೊತ್ತಂಬರಿ ದನಿಯಿಲ್ಲದ ಧನಿಯಾಯಿತು ನಮ್ಮವರ ತನ್ಮೆ ನೆಲೆಯಿಲ್ಲದೆ ಮಣ್ಣಾಯಿತು

ಉಣಲು ಕರೆದಳು

ಉಣಲು ಕರೆದಳು, ಹುಟ್ಟಿರುವ ಹುಡುತಿರುವ ಹುಡಲಿರುವ ಅವುಅವೆಲ್ಲದಕೂ ಅದರದರ ಸವಿಯೊಪ್ಪವ ಅನವರತ ಅಡಿಸಿಯುಣಿಸಿದಣಿವಾರಿಸಿಮುಗಿಸಿ ತಿಳಿನಂಟನೆರೆದು ಸೊಗಯಿಸಿದ ನಿಜತಾಯಿ ಹಸಿಧಸಿದು ತನ್ನಮನೆಯವರನ್ ಉಣಲು ಕರೆದಳು ಹಸಿಕೆಂದಾವರೆಮೊಗದಲ್ಲರಳಿದಿನ್ನೆರಡೆಳೆಬೆಳುದಾವರೆಕಂಗಳ ಬಲುನವಿರದಳದೆವೆಗಳ ತೆರೆಯದೆ, ಕುಳಿತೇಮಲಗಿ ಏಳೇಳುಲೋಕದ ನಡೆಮಾಟವ ಒಳಕಂಗಳಲೇ ಕಂಢರಸಿಯುರಿಸಿಯಾರಿಸುವ ನಿದಿರೆಯಮದಿರೆಯ ಕುಡುಕನನ್ ಉಣಲು ಕರೆದಳು ಮನೆಯಲಿ ಮನದಲಿ ಸರಸಿಪೂರ್ಣಾನ್ನಳನ್ನಿರಿಸಿಮರೆಸಿ ಕಂಡಕಂಡಲಿ ಬೇಡಿತಿರಿದುಣ್ಣುವನಾಟಕವ ಬೆಸಸಿಯರಿವಿನತಿಳಿವರಡುವ ಸಲುವಾಗಿಸಲಹುವ, ಬಲುಯಿಂಪುನುಡಿವ ಕಡುಗೆಂಪಿನವನ ಬೆಡಗಿನಸೊಬಗ ನೆನೆದುನನೆದುತಣಿದು ಮೆಲುನಗುತಲಿ ಹಸಿಧಸಿದು ಹುಸಿಹುಂಬನನ್ ಉಣಲು ಕರೆದಳು ಹಣದೊಡತಿಯನಣುಗನಲಿರಿಸಿ ಹಣದೊಡೆಯನಕಾಲ್ಬಳಿನೆಲಸಿ ನೊರೆವಾಲಮರೆಸುವಂದದರಮನೆಯ ತೊರೆದಿರಿಸಿ  ಹಾಲಗಡಲನೊರೆಯಲುಕ್ಕಿಧೆಗ್ಗರಳವ ಸಾರಿಸಿಕೂಡಿಸಿ ಗಟಗಟಾಯಿಸಿ ಕುಡಿದೊಣಗಿದಗಂಟಲದಣಿವಾರಿಸಲೆಣಸಿ ಎದಿರೆದಿರಾಗಿಮೊರೆದೂರೂರರ ಕಾಯ್ದಮರುಳನನ್ ಉಣಲು ಕರೆದಳು ಬಲುಬಿಂಕದ-ಮೂರೂರುರಿದದನು ಮೈಯ್ಯಂಗವೆಲ್ಲೆಡೆಸವರಿಸಿ, ಬಲುಚೆಂದದ-ಮಾರನುರಿದುದನು ಮೇನಿಯಲ್ಲಡರಿಬಳಿಯಿಸಿ ಸುಡುತಿರುವೆಲುಬುತೊಗಲ ನಡುವೆಡೆಯೆಲ್ಲಾ ತನ್ನತಾನವುಸಿಕುಳಿಸಿರಿಸಿ ಮೇಣೂರಲ್ಲೆಲ್ಲಾ ಮೈಯಿಲ್ಲದ ನಿರ್ಮೇನಿಯಾಗಿ ಮೆರೆದಿಹ ಮಾಯಾವಿಯನನ್ ಉಣಲು ಕರೆದಳು