ತಂದೆ

ಕೇಳುಕೇಳಿದದೆಲ್ಲವ ಕೊಡಲಾಗದಿದ್ದಿರಬಹುದು,
ಬೇಕಾದುದನ್ನು ಮಾತ್ರವೇ ಕೇಳಿ ಗೋಳಿಲ್ಲದೆ ಗಳಿಸುವ ಮನಸ್ಸಿನ ಸಂಸ್ಕೃತಿಯ ಮೂಲ ನೀವು.

ಹೇಳಿಕೇಳಿದುದೆಲ್ಲವ ಆಡಂಭರಿಸದಿದ್ದಿರಬಹುದು,
ವಿರಳವಾದ ಸರಳದ ಬದುಕನ್ನೇ ಜಂಭರಿಸದೆ ಡಂಭರಿಸುವ ಅಭಿಮಾನಿತನದ ಮೂಲ ನೀವು.

ತೇಗಿತೂಗೆಸೆವಷ್ಟು ತಿನಿಸುಣಿಸಿಲ್ಲದಿದ್ದಿರಬಹುದು,
ತುತ್ತನು ತೂಗದೆಲೆಯೆ ತೂಕವನರಿವ ತಿಳಿಮೆಯ ಸಾಧನೆಯ ಸುಳಿವಿನ ಸೆಲೆಯ ಮೂಲ ನೀವು.

ಸಾಕುಸಾಕೆನಿಸುವಷ್ಟು ವಿದ್ಯೆಯಿಲ್ಲದಿದ್ದಿರಬಹುದು,
ಅದಾವುದಾದರೇನು? ನುರಿತವನಿಗಿರುವ ಹಿರಿಮೆಯ ಗರಿಮೆ ತೋರಿಸಿದ ತೋಚಿನ ಮೂಲ ನೀವು

ಪೆದ್ದಮುದ್ದನೀವ ತಾಯ್ಮನಸು ನಿಮ್ಮದಲ್ಲದಿದ್ದಿರಬಹುದು,
ಗುದ್ದುಸದ್ದುಗಳಿಲ್ಲದೆ ತಿಳಿವಿನ ಮೊದ್ದುನಿದಿರೆಯ ತೊಡೆದು ಎದ್ದೇಳಿಸಿದ ಬುದ್ಧಿಹಿಂದಿನ ಅರಿವಿನ ಮೂಲ ನೀವು

ಧರಿಸಿದಾರ್ಢ್ಯದಿ ಧರ್ಮವ ಆಚರಿಸದಿದ್ದಿರಬಹುದು ನುಡಿಯ ಹಂಗಿಲ್ಲದೆ ನಡೆದೆ ತೋರಿಸಿದ ಶಿವತತ್ತ್ವದಾಧಾರಿ ಕಾಯಕದ ಸಿದ್ಧಿಯ ಗುರುತರ ಮೂಲ ನೀವು

-ಗುರುಶಾಂತೇಯ

Comments

Popular posts from this blog

Privacy policy for Android apps

ಉಣಲು ಕರೆದಳು

ನಲ್ಲಿ