Posts

Showing posts from August, 2017

ಹೆಂಡತಿ ಮೇಲೊಂದು ಕವಿತೆ

ಕವಿಯಾಗೊ ಬಯಕೆ ಕೆಲಕವಿತೆಗಳ ಗೀಚಿಸಿದರೂ, ನಿನ್ನ ಮೇಲೊಂದು ಕವಿವಾಕ್ಯ ಮೂಡದದೇಕೋ? ನಾನು ನಾನೆಂಬ ಬರಿ ಹಮ್ಮು, ನಾವಾಗಿ ಹಿಗ್ಗಿದುದಕೋ? ನಾನು ನಾನೆಂಬ ಒಣ ಬಿಮ್ಮು, ನಾವಾಗಿ ಕುಗ್ಗಿದುದಕೋ? ನಾನುಲಿವ ನುಡಿಸಾರದಲಿ, ನಿನ್ನ ಸಾವಿರ ಭಾವಪುಷ್ಟಿ! ನಾಕಾಣ್ವ ನೋಟದಿರಿಸಿನಲಿ, ನಿನ್ನ ಸಾವಿರ ಕಾವ್ಯಸೃಷ್ಟಿ! ನಮಗಾಗಿ ನಾವು ಸೇರಿ ಬಿಟ್ಟುಕೊಟ್ಟ ಬೇಡಗಳಿಗೋ? ನಮಗಾಗಿ ನಾವು ಸೇರಿ ಕಟ್ಟಿಕೊಂಡ ಬೇಕುಗಳಿಗೋ? ನಮಗಾಗಿ ನಾವು ಸೇರಿ ಮೈಗೂಡಿಸಿಕೊಂಡ ಬಯಕೆಗಳಿಗೋ? ನಮಗಾಗಿ ನಾವು ಸೇರಿ ಕಣ್ಗೂಡಿಸಿಕೊಂಡ ಕನಸುಗಳಿಗೋ? ನಾನು ನಿನಸೇರಿ ನಾವಾಗಿ ನಾನುನೀನೀನಾವಿನ ಬೇರ್ಪಾಡೇನು ನೀನು ನನಸೇರಿ ನಾವಾದ ತಾನತನನೀಯಾನದ ಸೇರ್ಪಾಡೇನು? ನಾನು ನಾವಾದಮೇಲೆ ನಾವು ನಾವಿನಮೇಲೇರಿದಮೇಲೆ ನಾನೆಂಬುದೆಂತು? ನೀನೆಂಬುದೆಂತು? ನಿನಮೇಲೆ ಕಾವ್ಯವೆಂಬುದೆಂತು? ಅದು ನನ್ನಲ್ಲಿ ಮೂಡುವುದೆಂತು? ಕಾವ ನುಡಿಯಾಗುವುದೆಂತು? ಅನಂಗಜಾರಿಗನಂಗಳಾದಗಜಳ ಪರಿಯೆಂತು? ಎಂತು ಎಂತುಗಳ ಗೋಜಿನ ಸಂತೆಯಲಿ ನನಗನಿಸಿದ್ದಂತೂ! ಇಂತು!. ಗುರುಶಾಂತೇಯ ೧೯-೦೮-೨೦೧೭

ನೈದಿಲೆ

ಮಳೆಯರಸ ಕಾಣಲರಸಿ ಸಾಲುಸಾಲಾಗಿಸೇರಿಸಿ ಹನಿಗಳಕಳುಹಿಸಿ ಇರುಳರಸ ಮುಗಿಲ್ಸರಿಸಿ ಮೂಲೆಮೂಲೆಯನೆಣಿಸಿ ಹಾಲ್ಬೆಳಕನಿಳಿಸಿ ಇಬ್ಬರರಸರೊರಸಿ ಗಿರಿಯರಸನೆಳೆಯರಸಿ ಕಿರುನೋಟವನರಸಿ ಬಗೆಬಗೆಯಲಿಸೆಣಸಿ ಹಗೆಯಡರಿಸಿ ತಾಮೇಲೆನಿಸಿ ನಾಮೇಲೆನಿಸಿ ನೆಲದರಸಿಯನುನಿಸಿ ತೋಯಿಸಿಮಿನುಗಿಸಿ ಕಂಗಳಕೋರೈಸಿ ಅಲ್ಲರಸಿ ಇಲ್ಲರಸಿ ಕೊಳದೊಳಗರಸಿ ಚಿಗುರುತಚದುರಿಸಿ ಬೆರಗಬಡಿಸಿ ಅರಳುವೆಳೆನೈದಿಲೆಯಕಂಡರಸಿ ಮೌನಪಡೆದರು ಕಣ್ದಳಗಳನರಳಿಸಿ ಇದನೋಡಿದಳು ಹುಸಿಮುನಿಸದೋರಿಸಿ ನಿಜಹರನರಸಿ ಮುಖವಸಿಂಡರಿಸಿ ಒಳಗೊಳಗೆಹರಸಿ. ಗುರುಶಾಂತೇಯ ೦೮ -೦೮-೨೦೧೭

ಮಗಳು

ಬಾಂದಳದ ಬಂಗಾರಿ ಅಂದಗಳ ಎಳೆಗೌರಿ ಮುಗಿಲ್ಮರೆಯ ಸಿಂಧೂರಿ ಜೊಲ್ಬಾಯ ಸಿಂಗಾರಿ ಕಿಲನಗೆಯ ಚಿನ್ನಾರಿ ಬಗೆಬಗೆಯ ನಟದೋರಿ ಹುಸಿದಳುವ ಎಣೆಯೂರಿ ನಗುಪಡೆವ ಹಠಮಾರಿ ತಾಯ್ಮಡಿಲ ದೇವೀರಿ ಚಂದನದ ನನೆಸಾರಿ ಕಾಣ್ವರಿಗೆ!! ತುಂಬಿದಳು ಕಣ್ವಾರಿ. ಇಂಗಳದ ಹೊಳಪವಳು ತಿಂಗಳಿನ ಮೆರುಪವಳು ಮಂಗಳನ ಸೆಳೆವವಳು ಮೂಡಣದ ರತಿಯಿವಳು ನಡುವಣದ ಉರಿಯಿವಳು ಪಡುವಣದ ತಂಪಿವಳು ಅನಂಗನುರಿದವನರೆಯಂಗವಿವಳು ಕೈಮುಗಿದು ಮುದ್ದಾಡು!! ನಿಜಗಿರಿಜೆಯಿವಳು, ಬಾಳ್ಗನಸ ತಿರುಳು ನನ್ನಮುದ್ದುಮಗಳು. ಪುಟಿದೆದ್ದ ಕನಸೊಂದು ಪುಟವಿಟ್ಟ ನನಸಾಗಿ ಬಟುವಿಟ್ಟ ವರವಾಗಿ ಕಟುನೋವ ಮುಗಿವಾಗಿ ಹಟತೊಟ್ಟು ಮಗಳಾಗಿ ವಿಟನಂತೆ ಕಂಗಳನು ಪಟಪಟನೆ ಆಡಿಸುತ ಕೋಕಿಟಳಂತೆ ನುಡಿಗಳಲಿ ವಟವಟನೆ ಉಲಿಯುತಲಿ ಚಟಬದ್ಧ ಕಾಲ್ಗಳನು ಲಟಲಟನೆ ಗಾಳಿಯಲಿ ತುಟತುಟನೆ ಓಡಿಸುತ ತುಟುಗರೆವ ಕೈಗಳಲಿ ಹಾಲ್ದುಟಿಗಳನು ಸಾವರಿಸಿ ಮಲಗಿದ್ದು ನಟನಾಟ್ಯ ಬಹುವಿಧದಿ ಆಟದಲಿ ಮುಳುಗಿರುವ ನಟರಾಜ ಮಗುವಾಗಿ. ಗುರುಶಾಂತೇಯ ೧೦-೦೮-೨೦೧೭