Posts

Showing posts from January, 2017

ಬೆಂಗಳೂರು

ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಸುಖಬಾಳನರಸಿ ಬಂದು ನೆಲೆಸಿಹೆವಿಲ್ಲಿ ಯಾರೋ ಎನದೆ ಹೇಗೋ ಅನದೆ ಏನೂ ಕೇಳದೆ ಮಡಿಲಲಿಟ್ಟು ಸಲಹಿದ ತಾಯ್ನೆಲದಲ್ಲಿ ನೂರಾರು ನುಡಿಗಳ ನೂರಾರು ನಡೆಗಳ ಬೇರ್ಪಾಡುಗಳು ನಮ್ಮೊಳಗೆ ಒಂದೇ ಮನೆಯ ಬೇರ್ಬೇರೆ ನಂಟಿನ ಹಿರಿಮೆ ನಮಗೀ ಕನ್ನಡ ನೆಲದೊಳಗೆ ಒಗರು ಭಿನ್ನತೆಯ ಬಿಮ್ಮುಗಳ ನಡುವೆಯೂ ಒಗ್ಗೂಡಿಸೋ ಕಾವೇರಿಯ ಸಿಹಿನೀರಿನ ಬೆರಕೆ ಪೊಗರು ಖಿನ್ನತೆಯ ಹಮ್ಮುಗಳ ನಡುವೆಯೂ ಒಡನಾಡಿಸೋ ಕನ್ನಡನೆಲದ ತಾಳ್ಮೆಯ ಹರಕೆ ಪಂಡಿತ ಗೋರಖ ಸಿಖ್ಖ ಮೇವಾಡ ಮಾರ್ವಾಡ ಗುಜರಾತ ಮರಾಠವಾಡ ಆರ್ಯ ದ್ರವಿಡ ಲಾತೀನ ಪಾರಸಿಕ ನುಡಿಗೂಸುಗಳ ಸಮೋಧ್ಯಾನದ ಅಖಾಡ ನಾಗ ವಂಗ ಕಳಿಂಗ ಆಂಧ್ರ ತೆಲಂಗ ತಮಿಳ ಮಲಯಾಳ ಕೊಂಗ ಮ್ಲೇಚ್ಛ ಯವನ ಯಹೂದ ಈಸಾಯಿ ಚೀನಿಗಳ ಕೂಡಿಕೊಂಡ ಹಿರಿಸಂಘ ಎಲ್ಲರಿಗೂ ಸಮಬಾಳು ಎಲ್ಲರಿಗೂ ಸಮಪಾಲು ಒಂದೇ ಹಾರೈಕೆ ಒಂದೇ ಓಲೈಕೆ ಒಗ್ಗಟ್ಟಿನ ತಿಳಿವಳಿಕೆ ಉಘೇ ಉಘೇ ತಾಯಿ ಸಮಸುಖಧಾತ್ರಿ ಮಾಯಿ ಮಹಗಾಯತ್ರಿ ನಿಜಗುಣಶಿವಯಾತ್ರಿ ತನ್ಮೆಯಿಂದಲೆ ದುಡಿದು ನನ್ಮೆಯಿಂದಲೆ ಪಡೆದು ಕೂಡಿ ಹಾಡುವ ಬನ್ನಿ ತಾಯ್ನೆಲದ ಮಮತೆಯ ಹಾಡ ಪುರಹರನೆ ಬೆರಗಾಗಿ ನಗುತ ಹರಸಿರುವ ಸಮಹಿತವಾಗಿರುವ ಸ್ವಯಮನ್ನಪೂರ್ಣೆಯ ನೆಲೆವೀಡ, ಚಂದನದ ಹಿರಿಕಾಡ, ಕನ್ನಡದ ಸಿರಿನಾಡ. ಗುರುಶಾಂತೇಯ ೧೪-೦೧-೨೦೧೭